ಕಚರಾ ವಿಲೇವಾರಿ : ಸೋಂಕಿನ ರೋಗಾಣುಗಳು ನೀರಿನಲ್ಲಿ ಬೆರೆತು ಮಾನವ ಮತ್ತೀತರ ಜೀವಿಗಳಿಗೆ ಹಾನಿಯಾಗದಂತೆ ತಡೆಯಲು, ಒಂದು ಊರಿನ ಜನ ಬಳಸಿದ ನೀರಿನಿಂದಾದ ಗಲೀಜಿನ ಕಚರಾವನ್ನು (ಸ್ಯೂಯೇಜ್) ಯಾರಿಗೂ ಅಪಾಯವಾಗದಂತೆ ಸಾಗಹಾಕುವ ಏರ್ಪಾಡು. ಮಲಮೂತ್ರಗಳೊಂದಿಗೆ ಮನೆ, ಕೊಟ್ಟಿಗೆ, ಲಾಯ, ರೊಪ್ಪ, ಕಸಾಯಿಖಾನೆಗಳಿಂದ ಬರುವ ಕೊಳಕು ನೀರು, ಕೈಗಾರಿಕೆ ಕಾರ್ಖಾನೆಗಳಿಂದ ಬರುವ ಕಸರೆ ವಸ್ತುಗಳಿಂದ ಬಂದುದು ಕೈಗಾರಿಕೆ ಕಸರೆ (ವೇಸ್ಟ್‌). ಕಚರಾದಲ್ಲಿ ಸಾಗಿ ರೋಗ ಹರಡಲು ಜನರಿಂದ ಬರುವ ಮಲಮೂತ್ರಾದಿಗಳೇ ಮುಖ್ಯವಾದುವು. ಎಲ್ಲಿಂದ ನೀರನ್ನು ಪಡೆದರೋ ಅಲ್ಲಿಗೆ ಯಾವ ಕೊಳಕೂ ಸೋಂಕೂ ಇಲ್ಲದೆಯೇ ನೀರನ್ನು ಹಿಂತಿರುಗಿಸುವುದು ಎಲ್ಲ ಊರು, ರಾಜ್ಯ, ಕೈಗಾರಿಕೆಗಳ ಕರ್ತವ್ಯ. ಊರಿಂದ ಹೊರಬೀಳುವ ನೀರಲ್ಲಿ ಕಚರಾವಸ್ತುಗಳು ಮಿತಿಮೀರಿದಲ್ಲಿ ಇವನ್ನು ಪಡೆವ ಹೊಳೆ, ನದಿ ಕಡಲುಗಳಲ್ಲಿ ಮೀನು ಮತ್ತಿತರ ಪ್ರಾಣಿಗಳು ಬದುಕದಂತಾಗುತ್ತವೆ. ಅಲ್ಲದೆ ಹರಿವ ನೀರನ್ನು ಇನ್ನೂ ಕೆಳಗೆ ಬಳಸುವವರಿಗೂ ಅಪಾಯ ತಟ್ಟುವುದು. ಆರೋಗ್ಯವಾಗಿರಲೂ ಹೊಲಸನ್ನು ತಡೆಗಟ್ಟಲೂ ಕಚರಾ ವಿಲೇವಾರಿ ಚೆನ್ನಾಗಿರಲೇಬೇಕು. ಇಷ್ಟಾದರೂ, ಕಚರಾ ಎಂದರೆ ಬರಿಯ ಕೆಲಸಕ್ಕೆ ಬಾರದ್ದಲ್ಲ. ಸರಿಯಾಗಿ ವಿಲೇವಾರಿಯಾದ ಕಚರಾದಿಂದ ಬೆಲೆಯುಳ್ಳ ನೈಟ್ರೇಟುಗಳು, ಫಾಸ್ಫೇಟುಗಳು, ಬಿ ಜೀವಾತು, ಮಿಥೇನ್, ಗ್ರೀಸು, ಜಿಡ್ಡು ಇತ್ಯಾದಿ ದೊರೆಯುತ್ತವೆ. ಇವನ್ನು ತೆಗೆಯುವುದರಿಂದ ಹರಿವ ನೀರು ಶುದ್ಧವಾಗಿ ಕೆಳನದಿಯವರಿಗೆ ಅಪಾಯ ತಪ್ಪುವುದು.

ಮನೆಗಳಿಂದ ಬರುವ ಕಚರಾ ನೀರಲ್ಲಿ ಜೈವಿಕ ವಸ್ತುಗಳೇ ಹೆಚ್ಚಿದ್ದು ಜೀವಾಣುಗಳ ವರ್ತನೆಯಿಂದ ಬೇಗನೆ ಕೊಳೆತು ನಾರುವುದರಿಂದ ದುರ್ನಾತವೇಳುತ್ತದೆ. ಜನರ ಮಲಮೂತ್ರಗಳೊಂದಿಗೆ ಗಲೀಜು ನೀರು ಹೆಚ್ಚಾಗಿರುತ್ತದೆ. ಆದರೆ ಇದರ ರಚನೆ ಬಹುಮಟ್ಟಿಗೆ ಜನರ ನೀರಿನ ಬಳಕೆ, ಮಳೆನೀರು, ಕೈಗಾರಿಕೆಗಳಿಂದ ಹೊರಬಿದ್ದ ನೀರು ಇವುಗಳ ಪ್ರಮಾಣಕ್ಕೆ ತಕ್ಕಂತಿರುವುದು. ಈ ವಸ್ತುಗಳು ಕರಗಿಯೋ, ತೇಲುತ್ತಲೋ, ಅಂಟಂಟಾಗೋ ಇರಬಹುದು. ರೋಗಿಗಳ ಮಲಮೂತ್ರಾದಿಗಳು, ಸೇರಿದರಂತೂ ರೋಗ ಹರಡುವುದರಲ್ಲಿ ಕಚರಾ ಅಪಾಯಕಾರಕ. ಕಾರ್ಖಾನೆಗಳಿಂದ ಹೊರಬೀಳುವ ಕಸರೆಯಲ್ಲಿನ ಕೊಳಕು ಆಯಾ ಕೈಗಾರಿಕೆಗೆ ಅನುಗುಣವಾಗಿರುವುದು. ಕೆಲವೇಳೆ ಇದರಲ್ಲಿ ಬಲು ಕೆಡುಕಿನ, ವಿಷಕರವಾದ, ಹೊತ್ತಿ ಉರಿವ, ಸಿಡಿವ ಪದಾರ್ಥಗಳು ಇರಲೂಬಹುದು. ಮನೆಯ ಎಂದಿನ ಒಂದು ಟನ್ ಕಚರಾ ನೀರಲ್ಲಿ ಅರೆ ಕಿಲೋಗ್ರಾಂನಷ್ಟು ಗಟ್ಟಿವಸ್ತುಗಳಿರುತ್ತವೆ. ಇವುಗಳಲ್ಲಿ ಅರೆಪಾಲು ಕರಗಿರುತ್ತವೆ, ಉಳಿದುದರ ಅರೆಪಾಲು ತೇಲುತ್ತಿರುತ್ತವೆ.
ಕಚರಾದ ಶುದ್ಧೀಕರಣ : ಕಚರಾ ನೀರು ಅಪಾಯಕರವಾಗದಂತೆ ಮಾಡುವ ನಿಸರ್ಗದ ಕ್ರಮಗತಿಯಲ್ಲಿ ಹಲವು ಬಗೆಗಳ ಜೈವಿಕ ವಸ್ತುಗಳನ್ನು ಬೇರೆ ಬೇರೆ ಹಂತಗಳಲ್ಲಿ ಒಡಕೆಡವುವ ಏಕಾಣುಜೀವಿಗಳ ಪಾತ್ರ ದೊಡ್ಡದು. ಕಾಲಾನುಕಾಲಕ್ಕೆ ಎಂಥ ಕಚರಾವನ್ನಾದರೂ ಸರಿಯೇ ನಿಸರ್ಗ ನಿಭಾಯಿಸಬಲ್ಲುದಾದರೂ ಇದರಿಂದೇಳುವ ದುರ್ವಾಸನೆ, ಗಲೀಜು ತಡೆವಂತಿರದು. ಪ್ರೋಟೀನುಗಳನ್ನು ಒಡೆಯಲು ಆಮ್ಲಜನಕವನ್ನು ಬಳಸಿಬಿಟ್ಟರೆ ಮೀನುಗಳು ಸಾಯುತ್ತವೆ. ನೆಲದಲ್ಲಿ ನೀರು ಸೋಸಿ, ಸೋರಿಹೋಗದ ಹಾಗೆ ಕಚರಾ ಅಡ್ಡಿಯಾಗಬಹುದು. ಆಗ ನೆಲಕ್ಕೆ ಕಚರಾಬೇನೆ (ಸ್ಯೂಯೇಜ್ ಸಿಕ್ನೆಸ್) ಹತ್ತಿ ಕೆಲಸಕ್ಕೆ ಬಾರದಂತಾಗುವುದು. ಆದ್ದರಿಂದ ಕಲಬೆರೆತ ಕಚರಾವನ್ನು ಸರಳ, ಅಚಲ, ಹಾನಿಕರವಾಗದ ಧಾತುಗಳಾಗಿ ನಿಸರ್ಗವೇ ಯಾವ ಗಲೀಜು ಕೆಟ್ಟ ನಾತ ಬಡಿಸದೆ ಮಾರ್ಪಡಿಸುವಂತೆ ನೆರವಾಗಲು ತಕ್ಕ ಕ್ರಮಗಳನ್ನು ಕೈಗೊಳ್ಳಬೇಕು. 
ಕಚರಾ ವಿಲೇವಾರಿಯಲ್ಲಿ ಹಲವು ಶುದ್ಧೀಕರಣ ಹಂತಗಳಿವೆ. ಮುಖ್ಯವಾಗಿ ಎರಡನ್ನು ಗುರುತಿಸಬಹುದು. ಇಂದಿನ ವಿಧಾನದಲ್ಲಿ ಮೊದಲಾಗಿ, ಕಚರಾ ಶುದ್ಧೀಕರಣ ಯಂತ್ರಾಗಾರವನ್ನು (ಪ್ಲಾಂಟ್) ಹಾಳುಗೆಡಸಿ ಕಚರಾ ಸಾಗಿ ಹರಿವ ಕೊಳಾಯಿಗಳಲ್ಲಿ ಅಡ್ಡಗಟ್ಟಬಹುದಾದ ಸರಳ, ಜಡವಾದ, ಗಟ್ಟಿವಸ್ತುಗಳಲ್ಲಿ ಆಗುವಷ್ಟನ್ನೂ ತೆಗೆಯಬೇಕು. ಇದಾದ ಮೇಲೆ ಎರಡನೆಯದಾಗಿ, ಕೊಳೆವ ವಸ್ತು ಬಹುಮಟ್ಟಿಗೆ ಭಾರದಿಂದ ತಳದಲ್ಲಿ ಗಸಿಯಾಗಿ ಕೂರಲು ಬಿಡಬೇಕು. ಆದ್ದರಿಂದ, ಆಮ್ಲಜನಕವನ್ನು ಉಳಿಸುವ ಗಟ್ಟಿವಸ್ತುಗಳನ್ನು ತೆಗೆದುಹಾಕುವ ಕಚರಾ ಶುದ್ಧೀಕರಣದ ಏರ್ಪಾಡು, ಎಷ್ಟರಮಟ್ಟಿಗೆ ಹೇಗಿರಬೇಕು ಎನ್ನುವುದು ಬಗೆಬಗೆಯಾಗಿರುವುದು.

 ಮೊದಲ ಶುದ್ಧೀಕರಣ 
ತೇಲಿಬರುವ ದೊಡ್ಡ ದೊಡ್ಡ ಕಸ, ಕಡ್ಡಿ ಮುಂತಾದುವನ್ನು ದಪ್ಪ ಕಣ್ಣಿನ ಬಲೆಗಳು ಸುಲಭವಾಗಿ ತೆಗೆದುಹಾಕಿದರೆ, ಇನ್ನುಳಿದ ಬೆರೆತು ತೇಲುವ ಪದಾರ್ಥದಲ್ಲಿ ಬಹುಪಾಲನ್ನು ಇನ್ನೂ ಸಣ್ಣ ಕಣ್ಣಿನ ಬಲೆಗಳಿಂದ ಬಾಚಿ ಹಾಕಬಹುದು. ಹೀಗೆ ತೆಗೆದ ಗಲೀಜನ್ನು ದಿನವೂ ಸುಟ್ಟುಹಾಕಬೇಕು. ಇಲ್ಲವೇ ಎಲ್ಲಾದರೂ ಹೂಳಬೇಕು.

ಬಲೆಗಳ ಹಿಂದುಗಡೆ ಎರಡು ಚಿಕ್ಕ ತೊಟ್ಟಿಗಳಿದ್ದು ಮರಳು ಬೂದಿ, ಕಲ್ಲು ಮಣ್ಣುಗಳಂಥ ಭಾರವಾದ ವಸ್ತುಗಳು ತಳವೂರಿದ ಮೇಲೆ, ಜೈವಿಕ ಪದಾರ್ಥ ಕಚರಾದೊಂದಿಗೆ ಮುಂದೆ ನಿಧಾನವಾಗಿ ಹರಿಯುತ್ತದೆ. ಮುಂದೆ, ಕಚರಾ ಹರಿವುದನ್ನು ಇನ್ನೂ ನಿಧಾನಗೊಳಿಸಿ ಗಟ್ಟಿವಸ್ತುಗಳಲ್ಲಿ ಬಹುಪಾಲನ್ನು ಗಸಿಗಟ್ಟಿಸುವ ತೊಟ್ಟಿಗಳಲ್ಲಿ (ಸೆಡಿಮೆಂಟೇಷನ್ ಟ್ಯಾಂಕ್ಸ್‌) ಹರಿಸಬೇಕು. ತೊಟ್ಟಿಗಳು ಯಾವಾಗಲೂ ತುಂಬಿರುತ್ತವೆ. ತಳದಲ್ಲಿ ಕೂಡಿದ ರಾಡಿಯನ್ನು ಆಗಾಗ್ಗೆ ಕೆರೆದು ಎತ್ತಿ ಹಾಕುತ್ತಿರಬೇಕು. ಗಸಿಗಟ್ಟಿಸುವ ತೊಟ್ಟಿಗಳಲ್ಲಿ ಹಲವು ಬಗೆಗಳಿವೆ.

 ಕೊನೆಯ ಶುದ್ಧೀಕರಣ 
ಇದು ಆಯಾ ಸಂದರ್ಭಕ್ಕೆ ತಕ್ಕಹಾಗಿರುವುದು. ಈ ಮುಂದಿನವಲ್ಲಿ ಯಾವುದಾದರೂ ಒಂದೋ ಎರಡೋ ಹೆಚ್ಚೋ ವಿಧಾನಗಳ ಬಳಕೆಯಾಗಬಹುದು. ಅವು 1 ನೀರು ಬೆರೆಸಿಕೆ (ಡೈಲ್ಯೂಷನ್), 2 ರಾಸಾಯನಿಕ ಶುದ್ಧೀಕರಣ, 3 ಜೈವಿಕ ಶುದ್ಧೀಕರಣ.
ನೀರು ಬೆರೆಸಿಕೆ: ಕಚರಾವನ್ನು ಮೊದಲು ಶುದ್ಧೀಕರಣಕ್ಕೆ ಒಳಪಡಿಸಿ ಇಲ್ಲವೇ ಒಳಪಡಿಸದೆಯೇ, ಹೊಳೆ, ನದಿ, ಕಡಲುಗಳಿಗೆ ಹರಿಯಬಿಡಬಹುದು. ಹಲವು ಗೊತ್ತಾದ ಭೌತ, ರಾಸಾಯನಿಕ, ಜೈವಿಕ ಕ್ರಮಗತಿಗಳಿಂದ ಕಚರಾ ಚೊಕ್ಕವಾಗುತ್ತದೆ. ಅಲ್ಲದೆ ಸುಮ್ಮನೆ ನೀರೊಳಕ್ಕೆ ಹರಿಯಬಿಟ್ಟರೆ ಕಚರಾದ ಎಷ್ಟೊ ಹೊಲಸು ಕಳೆದಂತಾಗುವುದು. ಒಂದಷ್ಟು ಗಟ್ಟಿ ಕಚರಾ ತಳವೂರುತ್ತವೆ. ನೀರಲ್ಲಿ ಸೇರಿದಾಗ ಅದರ ಸಾಂದ್ರತೆ ಇಳಿವುದು. ಗಿಡ, ಸಸಿ, ಜೀವಾಣುಗಳಿಗೂ ಶುದ್ಧೀಕರಣದಲ್ಲಿ ಪಾಲ್ಗೊಳ್ಳುತ್ತವೆ. ಕಚರಾಸಾರದಲ್ಲಿ ಆಮ್ಲಜನಕವಿರಬೇಕು. ಅಂತೂ ಹರಿವ ನೀರಿನ 40ರಿಂದ 20ರಲ್ಲಿ ಒಂದು ಪಾಲಿಗಿಂತಲೂ ಹೆಚ್ಚಿರಬಾರದು. ತಳದಲ್ಲಿ ಕಚರಾ ಕೂರಲೀಸದಷ್ಟು ವೇಗವಾಗಿ ನೀರು ಹರಿಯುತ್ತಿರಬೇಕು. ತೇಲುವ ಕಸ ದಂಡೆಯಲ್ಲಿ ರಾಶಿ ಬೀಳಬಾರದು. ಇಂಥ ನೀರಲ್ಲಿ ರೋಗಕಾರಕ ಜೀವಾಣುಗಳು ಇದ್ದೇ ಇರುವುದರಿಂದ ಆ ನೀರು ಜನರ ಬಳಕೆಗೆ ತಕ್ಕದ್ದಲ್ಲ. ಬಹುಮಟ್ಟಿಗೆ ಎಲ್ಲ ತೀರದ ಪಟ್ಟಣಗಳಲ್ಲೂ ಕೊಲ್ಲಿ ನೀರು ಹಿನ್ನುಗ್ಗುವ ನದಿಗಳ ತೀರದ ಊರುಗಳಲ್ಲೂ ಈ ತೆರನ ವಿಲೇವಾರಿ ಇತ್ತೀಚಿನ ತನಕ ರೂಢಿಯಲ್ಲಿತ್ತು. ಹೀಗೆ ಮಾಡುವುದರಿಂದ ಅಮೆರಿಕದಲ್ಲಿ ಇತ್ತೀಚೆಗೆ ಸ್ನಾನಮಾಡುವ ಕಡಲ ಕೆರೆಗಳಲ್ಲಿ ಗಲೀಜಾಗುವುದು ಕಂಡುಬಂದಿತು. ಬಲೆಗಳು, ಗಸಿಗಟ್ಟಿಸುವ ತೊಟ್ಟಿಗಳಿಂದ ಅರೆಬರೆ ಶುದ್ಧೀಕರಣದ ಗಟ್ಟಿವಸ್ತುಗಳನ್ನು ತೆಗೆವುದರಿಂದಲೋ ಹೊರಬಿಡುವ ಮುಂಚೆ ಕ್ಲೋರೀನೀಕರಣದಿಂದಲೋ ಇದರ ಬಗೆಹರಿಸಬಹುದು. ಲಂಡನ್, ಗ್ಲಾಸ್ಗೊ ನಗರಗಳ ಕಚರಾವನ್ನು ಅಲ್ಲಿನ ನದಿ, ಕೊಲ್ಲಿಗಳೊಳಕ್ಕೆ ಬಿಡುವ ಮುಂಚೆ ಚುರುಕುಗೊಳಿಸಿದ ರಾಡಿ (ಆಕ್ಟಿವೇಟೆಡ್ ಸ್ಲಡ್ಜ್‌) ವಿಧಾನದಿಂದ ಮೊದಲು ಶುದ್ಧೀಕರಣ ಆಗುತ್ತದೆ.
ಮುಂದುವರಿದ ನಾಡುಗಳಲ್ಲಿ ಆಗುವುದಕ್ಕಿಂತಲೂ ಹೆಚ್ಚು ಅಪಾಯಕಾರಿ ಭಾರತದ ಪರಿಸ್ಥಿತಿಯಾದ್ದರಿಂದ ಇಲ್ಲಿ ಶುದ್ಧೀಕರಿಸಿದ ಕಚರಾವನ್ನು ಎಂದಿಗೂ ನದಿ, ಹೊಳೆಗಳೊಳಕ್ಕೆ ಬಿಡಲೇಬಾರದು. ಯಾವ ಕೆಡಕೂ ಏಳದ ಹಾಗೆ ಕಚರಾವನ್ನು ಕೆಲವೇಳೆ ಅಪಾರವಾಗಿ ನದಿಯೊಳಕ್ಕೆ ತಳ್ಳಿಬಿಡಬಹುದು ಎನ್ನುವುದನ್ನು, ವಿದ್ಯಾಧರಿ ನದಿಯೊಳಕ್ಕೆ ಕೋಲ್ಕತ್ತಾದ ತೀರ ಕಚ್ಚಾ ಕಚರಾವನ್ನು ಹಾಕುತ್ತಿದ್ದುದರಿಂದ ಕಾಣಬಹುದಾಗಿತ್ತು. ಆದರೆ ಹಲವಾರು ವರ್ಷಗಳ ಕಾಲ ಅಷ್ಟೊಂದು ಕಚರಾವನ್ನು ತಳ್ಳುತ್ತಿದ್ದುದರಿಂದ ವಿದ್ಯಾಧರಿ ನದಿ ನೀರು ಇಂಗಿದುದನ್ನೂ ನೋಡಬಹುದು. ಹೀಗೆ ಅಪಾರ ನೀರಿನ ರಾಶಿಗೆ ಕಚರಾವನ್ನು ಬೆರೆಸುವ ಕಡೆಗಳಲ್ಲೆಲ್ಲ ಮೊದಲಾಗಿ ಬಲೆಗಟ್ಟಿ, ಭಾರವಾಗಿರುವ ಕೆಸರನ್ನು ಗಸಿಗಟ್ಟಿಸಿ, ಎಣ್ಣೆಜಿಡ್ಡುಗಳನ್ನು ತೆಗೆದುಹಾಕಿದ ಮೇಲೇ ಬಿಡಬೇಕು. ಕಚಾರದಲ್ಲೆ ತೇಲುತ್ತಿರುವ ಗಟ್ಟಿಪದಾರ್ಥಗಳನ್ನೂ ಗಸಿಗಟ್ಟಿಸುವ ಅಲ್ಲದೆ ನಂಜಿನ ತೊಟ್ಟಿಗಳಿಂದ (ಸೆಪ್ಟಿಕ್ ಟ್ಯಾಂಕ್ಸ್‌) ತೆಗೆದುಹಾಕಬೇಕು. ಕುಲ್ತೆ ನದಿಗೆ ಕೋಲ್ಕತ್ತದ ಕಚರಾವನ್ನು ತಳ್ಳುವ ಮುಂಚೆ ಈ ವಿಧಾನವೇ ಈಗ ಜಾರಿಯಲ್ಲಿದೆ.

 ರಾಸಾಯನಿಕ ಶುದ್ಧೀಕರಣ 
ತೇಲುತ್ತಿರುವ, ಕರಗಿರುವ ಹಲವಾರು ವಸ್ತುಗಳನ್ನು ಗಟ್ಟಿಗೊಳಿಸಿ ತಳವೂರುವಂತೆ ಮಾಡುವ ರಾಸಾಯನಿಕಗಳನ್ನು ಕಚರಾಕ್ಕೆ ಬೆರೆಸುವುದುಂಟು. ತಿಳಿಯಾಗಿ ತೇಲಿಕೊಂಡ ದ್ರವವನ್ನು ಮತ್ತಷ್ಟು ಚೊಕ್ಕಗೊಳಿಸಿ ಇಲ್ಲವೇ ಯಾವುದಾದರೂ ಹರಿವ ನೀರಿಗೋ ನೆಲದೊಳಕ್ಕೋ ಬಿಡಬಹುದು. ರಾಡಿಯನ್ನು ಆಮೇಲೆ ಬೆರಣಿಗಳಂತೆ ತಟ್ಟಿ ಗೊಬ್ಬರವಾಗಿ ಬಳಸಬಹುದು. ಸುಣ್ಣ, ಅಲ್ಯೂಮಿನಿಯಂ ಸಲ್ಫೇಟು, ಅನ್ನಭೇದಿ (ಹಿರೇಕಸ) ಮುಂತಾದುವೇ ಹೀಗೆ ಬೆರಸುವ ರಾಸಾಯನಿಕಗಳು. ಕಚರಾವನ್ನು ರಾಸಾಯನಿಕಗಳಿಂದ ಶುದ್ಧೀಕರಿಸುವುದರಲ್ಲಿ ಅವೆಷ್ಟೊ ಅನಾನುಕೂಲತೆಗಳಿವೆ. ಈ ಕ್ರಮ ಭಾರತದಲ್ಲಿ ಅಷ್ಟಾಗಿ ಎಲ್ಲೂ ಜಾರಿಯಲ್ಲಿಲ್ಲ. ಇದ್ದ ಕಡೆಗಳಲ್ಲೂ ಈಗ ಕೈಬಿಟ್ಟಂತಾಗಿದೆ. ದುಬಾರಿ ಖರ್ಚಿನದಲ್ಲದೆ, ರಾಡಿ ರಾಶಿ ಬೀಳುವುದರಿಂದ ವಿಲೇವಾರಿ ಕೂಡ ಕಷ್ಟ. ಕಚರಾ ತಿಳಿಯಾಗುವುದೇ ಹೊರತು, ಹೊರಬಿದ್ದ ನೀರಲ್ಲಿ ರೋಗಾಣುಗಳು ಇದ್ದೇ ಇರುವುವು.

 ಜೈವಿಕ ಶುದ್ಧೀಕರಣ 
ತೇಲುವ ವಸ್ತುಗಳನ್ನು ಹೆಪ್ಪುಗಟ್ಟಿಸಿ ತೆಗೆದುಹಾಕುವ ಬದಲಾಗಿ, ಈ ವಿಧಾನದಲ್ಲಿ ಜಟಿಲ ವಸ್ತುಗಳನ್ನು ಏಕಾಣುಜೀವಿಗಳು ಇನ್ನೂ ಸರಳವಸ್ತುಗಳಾಗಿ ಒಡಕೆಡವುತ್ತವೆ. ಮಲಮೂತ್ರಾದಿಗಳನ್ನು ಹಳ್ಳದಲ್ಲಿ ತಿಪ್ಪೆ, ಬೆರಗೊಬ್ಬರ (ಕಾಂಪೋಸ್ಟ್‌), ಕಚರಾ ತೋಟಗಾರಿಕೆ (ಫಾರ್ಮಿಂಗ್), ನೆಲದಲ್ಲಿ ಬಿಡುವು ಕೊಟ್ಟು ಸೋಸಿಬಿಡುವಿಕೆಗಳಲ್ಲೆಲ್ಲ ಜೀವಾಣುಗಳ ಕೈವಾಡವೇ ಇರುವುದರಿಂದ ಅವೂ ಜೈವಿಕ ಶುದ್ಧೀಕರಣಗಳೇ. ಜೀವಾಣುಗಳು ಗಾಳಿಜೀವಿಗಳೊ (ಈರೋಬ್ಸ್‌) ನಿರ್ಗಾಳಿಜೀವಿಗಳೊ (ಅನೀರೋಬ್ಸ್‌) ಆಗಿರಬಹುದು. ನಿರ್ಗಾಳಿಜೀವಿಗಳು ಕಚರಾದಲ್ಲಿರುವ ಹಲತೆರನ ಜೈವಿಕ ವಸ್ತುಗಳನ್ನು ಒಡೆಕೆಡವಿ, ಅರಗಿಸಿ, ನೀರಾಗಿಸಿ ಸರಳ ರಾಸಾಯನಿಕಗಳಿಗೆ ಇಳಿಸುತ್ತವೆ. ಅಮೋನಿಯ ಸಂಯುಕ್ತಗಳನ್ನು ನೈಟ್ರೇಟು, ನೈಟ್ರೈಟುಗಳಾಗಿ ಗಟ್ಟಿಗೊಳಿಸುವುವು ಗಾಳಿಜೀವಿಗಳು. ನೆಲದೊಳಕ್ಕೆ ಕಚರಾವನ್ನು ಬಿಟ್ಟರೂ ಹೀಗೇ ಆಗುವುದು.
ಚುರುಕುಗೊಳಿಸಿದ ರಾಡಿ ಶುದ್ದೀಕರಣ ಇನ್ನೊಂದು ಜೈವಿಕ ವಿಧಾನ. ಮುಂಚೆ ಕೊಂಚ ಶುದ್ಧೀಕರಿಸಿದ ಕಚರಾದೊಂದಿಗೆ ಒಂದಿಷ್ಟು ಚುರುಕುಗೊಳಿಸಿದ ರಾಡಿಯನ್ನು ಬೆರೆಸಿ ಚೆನ್ನಾಗಿ ಗಾಳಿಗೊಡ್ಡಿದ ಮೇಲೆ ನೈಟ್ರೀಕರಣವನ್ನು ಗಾಳಿಜೀವಿಗಳು ಪುರ್ತಿಗೊಳಿಸುತ್ತವೆ.
ನಂಜಿನ ತೊಟ್ಟಿ: ನಿರ್ಗಾಳಿಜೀವಿಗಳ ಪ್ರಭಾವಕ್ಕೆ ಸಾಕಷ್ಟು ಹೊತ್ತು ಕಚರಾ ಸಿಕ್ಕಿಬಿದ್ದಿರುವ, ಇದೊಂದು ಬಗೆಯ ಮುಚ್ಚಿದ ಬಚ್ಚಲುಗುಂಡಿ ಇಲ್ಲವೇ ಗಸಿಗಟ್ಟಿಸುವ ತೊಟ್ಟಿ ಎನ್ನಬಹುದು (ಸೆಪ್ಟಿಕ್ ಟ್ಯಾಂಕ್). ಸಾಕಷ್ಟು ನೀರಿನಿಂದ ಕೊಚ್ಚಿ ಹರಿಸಿದ ಕಚರಾ ನಂಜಿನ ತೊಟ್ಟಿಯೊಳಕ್ಕೆ ಹರಿದು ಬಂದು ಇನ್ನೊಂದು ಕೊನೆಯಲ್ಲಿನ ಕೊಳಾಯಿಯಿಂದ ಆಚೆಗೆ ಹರಿಯುವುದು. ನಿರ್ಗಾಳಿ ಜೀವಿಗಳಿಂದ ಜೀರ್ಣವಾಗುವಷ್ಟು ಹೊತ್ತು ಕಚರಾ ಅಲ್ಲೇ ಉಳಿದಿರುತ್ತದೆ. ಈ ತೊಟ್ಟಿಯ ಮೂಲಕ ಹೊರಕ್ಕೆ ಹಾಯುವ ವೇಗ, ತಳದಲ್ಲಿ ಗಸಿಗಟ್ಟುವ ಆಶೆಗಳಿಗೆ ತಕ್ಕಂತೆ ತೊಟ್ಟಿಯ ಆಕಾರ, ಗಾತ್ರಗಳಿರುವಂತೆ ಕಟ್ಟಿರಬೇಕು. ಮೂಲೆಗಳಲ್ಲಿ ರಾಡಿ ನಿಲ್ಲುವಂತಿರಬಾರದು. ತೊಟ್ಟಿಯ ಅಗಲ ಕಡಿಮೆ ಇದ್ದರೆ ಕಚರಾ ಬೇಗನೆ ಮುಂದೆ ಸಾಗಿ ಗಸಿಗಟ್ಟುವುದೂ ತಗ್ಗುತ್ತದೆ. ಮನೆಯಲ್ಲಿ ಇದರ ಬಳಕೆದಾರ ಒಬ್ಬೊಬ್ಬನಿಗೂ 3 ಘನ ಮೀ ನಷ್ಟಾದರೂ ಇದರ ಘನಗಾತ್ರ ಇರಬೇಕು. ಒಬ್ಬನಿಗೆ ದಿನಕ್ಕೆ 10 ಲೀಟರುಗಳಿಗೆ ಕಡಿಮೆ ಇಲ್ಲದಷ್ಟು ನೀರಾದರೂ ಹಾಕಬೇಕು.

ಈ ತೊಟ್ಟಿಯಲ್ಲಿ ಬೀಳುವ ಮಡ್ಡಿ, ರಾಡಿಯನ್ನು ಆಗಾಗ್ಗೆ ತೆಗೆಯಲೀಸುವಂತೆ ಇದರ ಮುಚ್ಚಳ ಇರಬೇಕು ಇಲ್ಲಿ ಏಳುವ ಅನಿಲಗಳು ದೂರ ಸಾಗುವ ಹಾಗೆ ಉದ್ದ ಕೊಳವೆ ಒಂದನ್ನು ಇದಕ್ಕೆ ತಗುಲಿಸಿ ನೆಟ್ಟಗೆ ನಿಲ್ಲಿಸಬೇಕು. ಸೊಳ್ಳೆಗಳು ಒಳಸೇರದಂತೆ ಬಲೆ ಹಾಕಿರಬೇಕು. ಒಳಗೆ ಹರಿದು ಬರುವ ನೀರು ಕೂಡಲೇ ನೇರವಾಗಿ ಹೊರಸಾಗದ ಹಾಗೆ ತಡೆ ತೆರೆಗಳು ಒಂದೆರಡು ಇರಬೇಕು.

 ಗಟ್ಟಿ ಉಂಡೆಗಳು 
ಇಟ್ಟಿಗೆ, ಕಲ್ಲುಚೂರುಗಳು ತೊಟ್ಟಿ ಸೇರಿ ನಿಜವಾದ ನಂಜಿನ ಪ್ರಭಾವವನ್ನು ಅಣಗಿಸದ ಹಾಗೆ ಅವನ್ನು ತಡೆವ ತೆರೆಯನ್ನು ಅಡ್ಡ ಇರಿಸಬೇಕು. ಇದರಿಂದ ತೊಟ್ಟಿಯ ಎಂಟನೆಯ ಒಂದು ಭಾಗ ಈ ಚೂರುಗಳ ಅರೆಯಾಗುವುದು; ಉಳಿದ ಭಾಗ ಜೀರ್ಣಕ ಅರೆ. ಇವೆರಡರ ನಡುವಣ ಸಂಬಂಧ ತಳದ ತೂಬಿನ ಮೂಲಕ. ಮಲದ ಉಂಡೆಗಳಲ್ಲಿ ನೂರಕ್ಕೆ 95ರಷ್ಟು ನೀರಲ್ಲಿ ತೇಲುವುದರಿಂದ ಜೀರ್ಣಕ ಅರೆಗೆ ಬಾರವು. ನಂಜಿನ ತೊಟ್ಟಿಯ ತಳದ ನಡುವಣ ಭಾಗ ತಗ್ಗಾಗಿದ್ದಲ್ಲಿ ಭಾರವಾದ ಪದಾರ್ಥಗಳು ಅಲ್ಲೇ ಉಳಿಯುತ್ತವೆ. ಕಚರಾ ಬಂದ ಮೇಲೆ 2"-6" ದಪ್ಪದ ನೊರೆ ಕಟ್ಟಿ ತೇಲುವುದು. ಇದರ ತಳದಲ್ಲಿ ನಿರ್ಗಾಳಿ ಜೀವಿಗಳ ಚುರುಕು ಕೆಲಸದಿಂದ ಗಟ್ಟಿ ವಸ್ತುಗಳೆಲ್ಲ ಒಡೆಕೆಡವಿದಂತಾಗಿ ನುಣ್ಣಗೆ ಅರಗುವುವು. ಜೀರ್ಣವಾಗದ ಅರೆದ್ರವವಾದ ಕಪ್ಪು ರಾಡಿ ಕೊನೆಗೆ ಉಳಿಯುತ್ತದೆ.

ನಂಜಿನ ತೊಟ್ಟಿಯಿಂದ ಹೊರಬಿದ್ದ ಕೆಟ್ಟ ವಾಸನೆಗಳೆದ್ದ ರೊಚ್ಚನ್ನು ಬೇಸಾಯ, ತೋಟಗಾರಿಕೆಗಳಲ್ಲಿ ಬಳಸಬಹುದು. ಸರಿಯಾಗಿ ಕಟ್ಟಿದ ನಂಜಿನ ತೊಟ್ಟಿಯಿಂದ ಕೆಟ್ಟ ವಾಸನೆ ಏಳದ್ದರಿಂದ ಮನೆ ಕಟ್ಟಡಗಳ ಬಳಿಯಲ್ಲೇ ಇದು ಇರಬಹುದು. ಆದರೂ ರಾಡಿಯನ್ನು ತೆಗೆಯಬೇಕಾದ್ದರಿಂದ ತುಸು ದೂರವಿದ್ದರೆ ಅನುಕೂಲ. ಕೆಲವು ವರ್ಷಗಳಿಗೆ ಒಂದು ಬಾರಿ ರಾಡಿಯನ್ನು ತೆಗೆದು ಹಾಕುವುದನ್ನು ಬಿಟ್ಟರೆ ನಂಜಿನ ತೊಟ್ಟಿಗಳಿಗೆ ಹೆಚ್ಚು ಗಮನ ಕೊಡಬೇಕಿಲ್ಲ. ದೊಡ್ಡವಾಗಿದ್ದರೆ ವರ್ಷಕ್ಕೊಂದು ಸಾರಿ ತೆಗೆಯಬೇಕು.

ಇದರಲ್ಲಿ ಮುಖ್ಯ ಪಾತ್ರವಹಿಸುವ ಜೀವಾಣುಗಳು ಸಾಯುವುದರಿಂದ, ನಂಜಿನ ತೊಟ್ಟಿಗೆ ಯಾವ ರೋಗಾಣುನಾಶೀ (ಡಿಸಿನ್ಫೆಕ್ಟೆಂಟ್) ಮದ್ದನ್ನೂ ಹಾಕಬಾರದು. ಮನೆಯ ಬಚ್ಚಲಲ್ಲೂ ಸುರಿಯಬಾರದು. ತೊಟ್ಟಿಯಲ್ಲಿ ನೊರೆಗಟ್ಟಲೂ ಅನಿಲಗಳೇಳಲೂ ಮೇಲುಗಡೆ ಸಾಕಷ್ಟು ಜಾಗವಿರಬೇಕು. ಕೇವಲ ಮಲಮೂತ್ರ, ತೊಳೆದ ನೀರು ಸೇರುವ ಕಚರಾದ ಹರಿವು ಸಾಮಾನ್ಯವಾಗಿ ಒಬ್ಬನಿಗೆ ದಿನಕ್ಕೆ 3 ಲೀಟರುಗಳನ್ನು ಮೀರದು. ನಂಜಿನ ತೊಟ್ಟಿಯಿಂದ ಹೊರಬಿದ್ದ ನೀರಿನ ವಿಲೇವಾರಿಗೆ ನಮ್ಮಲ್ಲಿ ಕೊರೆಗುಂಡಿಗಳು (ಬೋರ್ಹೋಲ್ಸ್‌), ಇಮರುಗಣಿಗಳು, (ಸೋಕ್ಪಿಟ್ಸ್‌) ಒಳ್ಳೆಯವು.
ನೀರು ಕಕ್ಕಸು : ಮಲಮೂತ್ರ ಸಾಗಣೆಗೆ ಸಾಕಷ್ಟು ನೀರು ದೊರೆಯದಾಗ ಮುಖ್ಯವಾಗಿ ಕಾಡುತೋಟಗಳಲ್ಲಿ (ಪ್ಲಾಂಟೇಷನ್ಸ್‌) ಮತ್ತು ಚಿಕ್ಕ ರೈಲುನಿಲ್ದಾಣಗಳಲ್ಲಿ ಕಚರಾವನ್ನು ಜೈವಿಕ ವಿಧಾನದಲ್ಲಿ ವಿಲೇವಾರಿ ಮಾಡಲು ನೀರು ಕಕ್ಕಸನ್ನು (ಅಕ್ವ ಪ್ರೀವಿ) ಬಳಸುವುದುಂಟು. ಇದರಲ್ಲಿ ನಂಜಿನ ತೊಟ್ಟಿಯ ಮೇಲೆಯೇ ಕಕ್ಕಸಿನ ಪಾದಪೀಠಗಳಿರುವುವು. ಇದರಿಂದ ಅನಾನುಕೂಲತೆಗಳೇ ಹೆಚ್ಚು. ಕಚರಾ ನೊರೆಗಟ್ಟಿದ್ದು ಮಲ ಬಿದ್ದಾಗ ಒಂದೊಂದು ಬಾರಿಯೂ ಕಕ್ಕಸು ಕದಡಿದಂತಾಗಿ ದುರ್ನಾತದ ಅನಿಲಗಳು ಕಕ್ಕಸೊಳಕ್ಕೇ ಬರುತ್ತವೆ. ಅಲ್ಲದೆ ಗಲೀಜಿನ ನೊರೆ ಮೇಲುಗಡೆಯೇ ಕಾಣುವುದು. ಕಚರಾ ಸಾಕಷ್ಟು ದಿನಗಳು ನೀರು ಕಕ್ಕಸಲ್ಲಿ ಉಳಿಯದೆ ಶುದ್ಧೀಕರಣ ಆಗದೆಯೇ ಹೊರಬೀಳುತ್ತದೆ.
ಬೇಸಾಯದಲ್ಲಿ ಕಚರಾ ವಿಲೇವಾರಿ : ನೆಲದಲ್ಲಿ ಹರಿಸಿ ಕಚರಾ ವಿಲೇವಾರಿ ಮಾಡಲು, ನೆಲದೊಳಗೆ ನೀರಾವರಿ (ಸಬ್ಸಾಯಿಲ್ ಇರಿಗೇಷನ್), ಬಿಟ್ಟು ಬಿಟ್ಟು ಸೋಸಿ ಇಳಿಸುವಿಕೆ (ಇಂಟರ್ಮಿಟೆಂಟ್ ಡೌನ್ವರ್ಡ್ ಫಿಲ್ಟ್ರೇಷನ್), ಕಚರಾ ತೋಟಗಾರಿಕೆ (ಸ್ಯೂಯೇಜ್ ಫಾರ್ಮಿಂಗ್) ಎಂಬ ಮೂರು ವಿಧಾನಗಳಿವೆ.

 ನೆಲದೊಳಗೆ ನೀರಾವರಿ 
ಮನೆಯಲ್ಲಿ ಕಟ್ಟಿದ ನಂಜಿನ ತೊಟ್ಟಿಯಿಂದ ಬರುವ ಕಚರಾ ವಿಲೇವಾರಿಗೆ ಇದು ಸಾಮಾನ್ಯವಾಗಿ ಬಳಕೆಯಲ್ಲಿದೆ. ಅಲ್ಲಲ್ಲಿ ಬಿಟ್ಟು ಬಿಟ್ಟು ಜೋಡಿಸಿದ ಬೇಸಾಯದ ಚರಂಡಿ ಕೊಳಾಯಿಗಳ ಮೂಲಕ ಶುದ್ಧೀಕರಿಸಿದ ಕಚರಾ ಹರಿಯುತ್ತದೆ. ನೆಲದ ಮಣ್ಣು ಒಣಕಲಾಗಿ ಮರಳಿನಂತಿರಬೇಕು. ಜೇಡಿಸುಣ್ಣ ಗೂಡಿದ ಮಣ್ಣುಗಳು ತಕ್ಕವಲ್ಲ. ಕಚರಾವನ್ನು ಬಿಡುವು ಕೊಟ್ಟು ಹರಿಸುವಾಗ ಈ ವಿಧಾನ ಒಳ್ಳೆಯದು.
ಬಿಟ್ಟು ಬಿಟ್ಟು ಸೋಸಿ ಇಳಿಸುವಿಕೆ: ಇಲ್ಲಿ ಕಚರಾ ನೀರನ್ನು ಶುದ್ಧೀಕರಿಸಲು ನೆಲವೇ ಸೋಸಬೇಕಾದ್ದರಿಂದ ಈ ವಿಧಾನಕ್ಕೆ ಉಸುಬಿನಂತಿರುವ ಮಣ್ಣಿದ್ದರೆ ಒಳ್ಳೆಯದು. ಇಲ್ಲಿ ಗೊತ್ತಾದ ಚಿಕ್ಕ ಜಾಗದಲ್ಲಿ ನೀರನ್ನು ಇಮರಿಸುವುದು ಮುಖ್ಯವೇ ಹೊರತು ಅದರಿಂದ ಬೆಳೆ ಎತ್ತುವುದು ಮುಖ್ಯ ಗುರಿಯಲ್ಲ. ಕಚರಾ ನೀರನ್ನು ತಡೆತಡೆದು ಬಿಡುವುದು ಮುಖ್ಯ. ಇಲ್ಲೂ ಶುದ್ಧೀಕರಣಕ್ಕೆ ಕಾರಣ ನೆಲದ ಮೇಲ್ಮೈ ಮಣ್ಣಿಲ್ಲಿರುವ ನೈಟ್ರೀಕರಿಸುವ ಜೀವಾಣುಗಳು, ಏಕಾಣುಜೀವಿಗಳೇ. ಇದು ಕೈಗೂಡಬೇಕಾದರೆ ದೊಡ್ಡ ಸೋಸುಪಾತಿಗಳ (ಫಿಲ್ಟರ್ ಬೆಡ್ಸ್‌) ಮಾದರಿಯಲ್ಲಿರಬೇಕು.
ಪಾತಿಗಳ 6’ಗಳ ತಳದಲ್ಲಿ ಚರಂಡಿ ಕೊಳಾಯಿಗಳು 10’ಗಳಷ್ಟು ದೂರದಲ್ಲಿರಬೇಕು. ಇವುಗಳ ಮೇಲೆ ದಪ್ಪ ಕಲ್ಲುಚೂರುಗಳೂ ಮರಳಿನಂಥ ಮಣ್ಣನ್ನೂ ಹರವಬೇಕು. ನೆಲದ ಇಳಿಜಾರು ಕಚರಾ ನೀರನ್ನು ಎಲ್ಲ ಕಡೆಗಳಿಗೂ ಹರಿಸುವಂತಿರಬೇಕು. ನೆಲದ ಮೇಲೆ ಕಚರಾ ನೀರನ್ನು ಕಾಲುವೆಗಳಲ್ಲಿ ಹರಿಸಬೇಕು. 6 ತಾಸುಗಳು ಒಂದೆಡೆ ಹರಿದರೆ ಮುಂದಿನ 18 ತಾಸುಗಳು ಬಿಡುವು ಕೊಟ್ಟು ಗಾಳಿಯಾಡಲು ಬಿಡಬೇಕು. ಹೀಗೆ ಮಾಡಿದರೆ ನೆಲಕ್ಕೆ ಕಟ್ಟರೆ ಆಗದು. ಏರು ತಗ್ಗುಗಳಲ್ಲಿ ಬೆಳೆ ಇಡಲೂಬಹುದು. ಏರಿನಲ್ಲಿ ಕಚರಾ ಹರಿವಾಗ ತಗ್ಗು ಬಿಡುವಾಗಿರುತ್ತದೆ. ನೆಲದೊಳಗಿಂದ ಹೊರಬಿದ್ದ ಕಚರಾಸಾರ ಕೊಳೆಯದು. ಆದ್ದರಿಂದ ಯಾವ ಕೆಡುಕೂ ಇಲ್ಲದೆ ಸೀದಾ ಹೊಳೆ, ನದಿಗಳೊಳಕ್ಕೆ ಬಿಟ್ಟು ಬಿಡಬಹುದು. ಸಾಕಷ್ಟು ಜಮೀನು ಇರುವುದಾದರೆ ಇದು ಒಳ್ಳೆಯ ಸರಳ ವಿಧಾನ, 3,000 ಮಂದಿ ಇರುವೆಡೆಗೆ ಒಂದು ಎಕರೆ ಜಮೀನು ಸಾಕು.
ಕಚರಾ ತೋಟಗಾರಿಕೆ: ಪಟ್ಟಣ, ನಗರಗಳ ಬಳಿ ಜಮೀನು ದೊರೆತರೆ ಈ ವಿಧಾನ ಸಲ್ಲುತ್ತದೆ. ಇದು ಕಚರಾ ಶುದ್ಧೀಕರಣದ ಬಲು ಹಳೆಯ ವೈಜ್ಞಾನಿಕ ವಿಧಾನ. ವಿಶಾಲವಾಗಿರುವ ಸಾಮಾನ್ಯ ಬೇಸಾಯದ ಜಮೀನಿನ ಮೇಲೆ ಕಚರಾ ನೀರನ್ನು ಹರಿಯಿಸಿ, ಆಗುವಷ್ಟೂ ಹೆಚ್ಚಾಗಿ ತೋಟಗಾರಿಕೆಯಲ್ಲಿ ಬೆಳೆ ಎತ್ತಿ ಕಚರಾವನ್ನು ಶುದ್ಧೀಕರಿಸುವ ಏರ್ಪಾಡಿದು. ನಗರಕ್ಕೆ ತಗ್ಗಿನಲ್ಲಿದ್ದು ಒಳಚರಂಡಿಗಳ ಮೂಲಕ ಕಚರಾ ಹರಿದು ಬರುವಂತಿರಬೇಕು. ಮಣ್ಣು ಮರಳಿನಂತಿದ್ದರೆ ಒಳ್ಳೆಯದು. ಗಟ್ಟಿ ಕಸಕಡ್ಡಿಗಳನ್ನು ತಡೆ ಹಾಕಿಟ್ಟು ಕಚ್ಚಾ ಕಚರಾವನ್ನೇ ಹರಿಸಬೇಕು. ಜಮೀನಿನ ಮೇಲೆ ಒಂದೇ ಸಮನಾಗಿ ಕಚರಾ ಹರಿಸದೆ ಬಿಡುವು ಕೊಟ್ಟು ಹಾಯಿಸಿದರೆ ಗಾಳಿಗೆ ಒಡ್ಡಿದಂತಾಗುವುದು. ಎತ್ತರದ ಪಾತಿಗಳಲ್ಲಿ ಬೆಳೆಯಿಟ್ಟು ತಗ್ಗಿನ ಕಾಲುವೆಗಳಲ್ಲಿ ಕಚರಾವನ್ನು ಹರಿಸಬಹುದು. ಹೀಗೆ ಮಾಡಲು ಉಷ್ಣವಲಯದಲ್ಲಿ 100 ಮಂದಿಗೆ ಒಂದು ಎಕರೆ ಜಮೀನು ಬೇಕು. ಭಾರತದಲ್ಲಿ ಬಿಸಿಲಿನಿಂದ ಇಮರುವುದು ಹೆಚ್ಚಿರುವುದರಿಂದ ಅಷ್ಟೊಂದು ಜಾಗ ಬೇಕಿಲ್ಲ. ಆದರೆ ಮಳೆಗಾಲದಲ್ಲಿ ಕಚರಾ ವಿಲೇವಾರಿಗೆ ತೊಂದರೆಯಾಗುತ್ತದೆ.

ಭಾರತದಲ್ಲಿ ಮೈಸೂರು ನಗರದಲ್ಲೂ ಪಂಜಾಬ್, ಉತ್ತರ ಪ್ರದೇಶಗಳಲ್ಲೂ ಇದು ಲಾಭಕರವಾಗಿ ಜಾರಿಯಲ್ಲಿದೆ. ಈ ವಿಧಾನದಲ್ಲಿ ಶೇ. 90 ಗಲೀಜನ್ನೂ ಏಕಾಣು ಜೀವಿಗಳನ್ನೂ ತೆಗೆದಂತಾದರೂ ಹೊರಸಾಗುವ ಕಚರಾ ನೀರು ಕೊಳೆವುದು. ಇದರ ಸಹಾಯದಿಂದ ಹುಲ್ಲು, ಕಬ್ಬು, ಬಾಳೆ, ತರಕಾರಿಗಳನ್ನು ಚೆನ್ನಾಗಿ ಬೆಳೆಸಬಹುದು. ಆದರೆ ಜಮೀನು ತಡೆಯಲಾರದಷ್ಟು ಕಚರಾವನ್ನು ಬಿಡುವಿಲ್ಲದೆ ಹರಿಸುತ್ತಿದ್ದರೆ ಅದು ಬೇಗನೆ ಕೆಲಸಕ್ಕೆ ಬಾರದಾಗುತ್ತದೆ.

 ಮರಳಿನ, ಕಂಕರೆಯ ಪಾತಿಗಳ ಮೂಲಕ ಸೋಸಿಕೆ 
ಈ ವಿಧಾನದಲ್ಲಿ, ತಾಕು ಪಾತಿಗಳು (ಕಾಂಟ್ಯಾಕ್ಟ್‌ ಬೆಡ್ಸ್‌) ಇಲ್ಲವೇ ಒಡಿಕಟ್ಟುವ (ಪರ್ಕೊಲೇಟಿಂಗ್) ಪಾತಿಗಳ ಮೂಲಕ ಕಚರಾದ ಶುದ್ಧೀಕರಣ ಆಗುತ್ತದೆ.

 ತಾಕು ಪಾತಿಗಳು 
ನಾಲ್ಕಾರು ಮೀ ಗಳು ಆಳದ, ಗಟ್ಟಿ ಇಟ್ಟಿಗೆ, ಕಲ್ಲು ಚೂರುಗಳು ತುಂಬಿರುವ, ನೀಳ ಚೌಕಾಕಾರದ ಗಾರೆ ತೊಟ್ಟಿಗಳು. ನೀರನ್ನು ಹೊರಬಿಡಲು ತಳದಲ್ಲಿ ತೂಬುಗಳಿವೆ. ಇಟ್ಟಿಗೆ, ಕಲ್ಲುಗಳು ಕರಗದೆ ಉಳಿದು ಏಕಾಣುಜೀವಿಗಳ ಬೆಳೆವಣಿಗೆ, ಪ್ರಭಾವ ತೋರಲು ವಿಶಾಲ ತಳವನ್ನು ಒದಗಿಸುತ್ತವೆ. ಇವನ್ನು ಆಗಾಗ್ಗೆ ಹೊರತೆಗೆದು ತೊಳೆದು ಮತ್ತೆ ಹಿಂತಿರುಗಿಸಬೇಕು. ಗಸಿಗಟ್ಟಿಸುವ ತೊಟ್ಟಿಗಳಿಂದ ಬರುವ ಕಚರಾ ನೀರು ಇಲ್ಲವೇ ನಂಜಿನ ತೊಟ್ಟಿಯಿಂದ ಬಂದ ಗಲೀಜು ಸಾರವನ್ನು ಇವುಗಳಲ್ಲಿ 2-4 ತಾಸುಗಳಾದರೂ ಇರಿಸಿದ್ದರೆ ಅದು ಏಕಾಣುಜೀವಿಗಳ ಪ್ರಭಾವಕ್ಕೆ ಸಿಗುತ್ತದೆ. ಪಾತಿಗಳನ್ನು ಬರಿದು ಮಾಡಿದಾಗ ಗಾಳಿಗೊಡ್ಡಿದಂತಾಗುತ್ತದೆ. ತಾಕು ಪಾತಿ ತುಂಬಲೂ ಬರಿದಾಗಲೂ ತಾಸಿಗಿಂತಲೂ ಹೆಚ್ಚು ಹೊತ್ತು ಹಿಡಿಯಬಾರದು. 4 ತಾಸು ಕೆಲಸ ಮಾಡಿದರೆ 8 ತಾಸು ಬಿಡುವಿರದಿದ್ದಲ್ಲಿ ಏಕಾಣುಜೀವಿಗಳು ಗಾಳಿಯಿಲ್ಲದೆ ಸಾಯುತ್ತವೆ. ಇದರಿಂದ ಹೊರಬೀಳುವ ಸಾರದಲ್ಲಿ ಗಟ್ಟಿ ವಸ್ತುಗಳಿರುವುದರಿಂದ ಒಡಿಕಟ್ಟುವ ಸೋಸಿಕಗಳಿಂದ ಬಂದುದರಷ್ಟು ಒಳ್ಳೆಯದಲ್ಲ. ಈ ವಿಧಾನದಲ್ಲಿ ಉಸ್ತುವಾರಿ ಸಿಬ್ಬಂದಿ ಹೆಚ್ಚಾಗಿ ಬೇಕು. ಇದು ಅಷ್ಟಾಗಿ ಈಗ ಜಾರಿಯಲ್ಲಿಲ್ಲ.

ಒಡಿಕಟ್ಟುವ ಸೋಸಿಕೆಗಳು: ಇವನ್ನು ಚಿಮುಕಿಸುವ, ತೊಟ್ಟಿಕ್ಕಿಸುವ, ಚೆಲ್ಲುವ ಸೋಸಿಕಗಳೆಂದೂ ಕರೆವುದುಂಟು. ಇವುಗಳ ರೀತಿ, ಬಳಕೆ ತಾಕು ಪಾತಿಯದರ ಹಾಗೆ ಇದ್ದರೂ ತಿಳಿಗೊಳಿಸಿದ ಕಚರಾವನ್ನು ಇವುಗಳೊಳಕ್ಕೆ ಹಾಕುವ ವಿಧಾನ ಮಾತ್ರ ಬೇರೆ. ಇವು ಗುಂಡಗೋ ನೀಳ ಚೌಕಾಕಾರವಾಗೋ ಇದ್ದು, 2 ಮೀ ಆಳದಲ್ಲಿ ಕಲ್ಲು ಇಟ್ಟಿಗೆಗಳ ಗಟ್ಟಿ ಚೂರುಗಳಲ್ಲಿ ದಪ್ಪನವು ಕೆಳಗಿರುವಂತೆ ಕ್ರಮವಾಗಿ ಜೋಡಿಸಿರುವುದು. ಇದರಿಂದ ಗಾಳಿಯಾಡಲು ಸರಾಗ, ಗಸಿಗಟ್ಟಿಸುವ ತೊಟ್ಟಿಯಿಂದಲೋ ನಂಜಿನ ತೊಟ್ಟಿಯಿಂದಲೋ ಬಂದ ಸಾರವನ್ನು ಇದರ ಮೇಲೆ ಅಲುಗಾಡದಂತೆ ಜೋಡಿಸಿರುವ, ಅತ್ತಿಂದಿತ್ತಲೋ ಗುಂಡಗೋ ಸುತ್ತಿಡುವ, ಆಗಾಗ್ಗೆ ಚೆಲ್ಲುವ ಕೊಳಾಯಿಗಳಿಂದ, ಬಿಡುವು ಕೊಡುತ್ತ ಚೆಲ್ಲಬೇಕು. ಎಲ್ಲೆಲ್ಲೂ ಒಂದೇ ಸಮನಾಗಿ ಹರಡಿಕೊಳ್ಳುತ್ತದೆ. ಇಲ್ಲೂ ಚೆನ್ನಾಗಿ ಬೆಳೆದ ಏಕಾಣುಜೀವಿಗಳ ವರ್ತನೆಯಿಂದ ಕಚರಾ ಸಾರ ಚೊಕ್ಕವಾಗಿ ಹೊರಬೀಳುತ್ತದೆ. ಕೆಲವೇಳೆ ಪದರಗಟ್ಟಿದ ಏಕಾಣುಜೀವಿಗಳೂ ಹೊರಬಿದ್ದ ಸಾರದಲ್ಲಿ ಇರಬಹುದಾದ್ದರಿಂದ ಮತ್ತೊಂದು ಗಸಿಗಟ್ಟಿಸುವ ತೊಟ್ಟಿಯಲ್ಲಿ ಹಾಯಿಸಬೇಕು. ಈ ಸೋಸಿಕಗಳನ್ನು ಸರಿಯಾಗಿ ಯೋಜಿಸಿ ಆರಂಭಿಸಿದರೆ ಆಮೇಲೆ ಉಸ್ತುವಾರಿ ಬೇಕೆನಿಸದು. ಇದಕ್ಕೆ ದುಬಾರಿ ಖರ್ಚಿಲ್ಲ, ಹಿಡಿವ ಜಾಗ ಕಡಿಮೆ, ಚೆನ್ನಾಗಿ ಚೊಕ್ಕಗೊಳಿಸುವುದು.

ಚುರುಕುಗೊಳಿಸಿದ ರಾಡಿ: ಕಚರಾದ ವಿಲೇವಾರಿಯಲ್ಲಿ ನಿಜವಾಗೂ ಗಾಳಿಜೀವಿ ವಿಧಾನವಿದು. ಇರುವ ವಿಧಾನಗಳಲ್ಲೆಲ್ಲ ಇದೇ ಬಲು ಒಳ್ಳೆಯದು. ಒಡಿಕಟ್ಟುವ ಸೋಸಿಕಗಳಲ್ಲಿ ಏಕಾಣುಜೀವಿ ಪದರಗಳಲ್ಲಿ ಆಗುವ ಕೆಲಸವನ್ನು ಚುರುಕುಗೊಳಿಸಿದ ರಾಡಿ ಮಾಡುತ್ತವೆ. ಇನ್ನೂ ಚೆನ್ನಾಗೇ ಮಾಡುವುದೆನ್ನಬಹುದು. ಒಡಿಕಟ್ಟುವ ಸೋಸಿಕಗಳಲ್ಲಿ ಕಚರಾ ಸಾರವನ್ನು ಎರಚಿದರೆ, ಇಲ್ಲಿ ಅದಕ್ಕಾಗಿ ಕಟ್ಟಿದ ತೊಟ್ಟಿಗಳಲ್ಲಿ ತುಂಬಿರುವ ಕಚರಾದ ಮೂಲಕ ಸಣ್ಣ ಚಿಮ್ಮು ಗೋವಿಗಳಿಂದ ಗಾಳಿಬುಗ್ಗೆ ಏಳುತ್ತದೆ. ಕಚರಾದ ಸಾಂದ್ರತೆ, ಚೊಕ್ಕಗೊಳಿಸಬೇಕಾದ ಮಟ್ಟಗಳಿಗೆ ತಕ್ಕಂತೆ, ಸಾಮಾನ್ಯವಾಗಿ ಆರೆಂಟು ತಾಸುಗಳ ಹೊತ್ತು, ಕಚರಾದೊಂದಿಗೆ ಚುರುಕುಗೊಳಿಸಿದ ರಾಡಿಯನ್ನು ಬೆರೆಸಿ ಗಾಳಿಬುಗ್ಗೆ ಏಳಿಸಬೇಕು. ಕೆಲವೇಳೆ 2-24 ತಾಸುಗಳೇ ಹಿಡಿಯಬಹುದು. ಚೊಕ್ಕವಾದ ಸಾರದಿಂದ ರಾಡಿಯನ್ನು ತೆಗೆದು ಹಾಕಬಹುದು ಇಲ್ಲವೇ ಚುರುಕುಗೊಳಿಸಿ ಮತ್ತೆ ಬಳಸಬಹುದು.

ಒತ್ತಡದಲ್ಲಿರುವ ಗಾಳಿಯನ್ನು ಗುಳ್ಳೆಗಳೇಳುವಂತೆ ಒತ್ತಿ ಬಿಡುವ ಗಾಳಿತೂರಿಕಗಳ (ಡಿಫ್ಯೂಸರ್ಸ್) ತಳದಲ್ಲಿ ಅಳವಡಿಸಿರುವ ಗಾಳಿಗೊಡ್ಡುವ ತೊಟ್ಟಿಗಳಲ್ಲಿ ಕಚ್ಚಾಕಚರಾದಿಂದ ಚುರುಕುಗೊಳಿಸಿದ ರಾಡಿ ತಯಾರಾಗುತ್ತದೆ. 2 ಲೀಟರು ಕಚರಾಕ್ಕೆ 1.75 ಘನ ಮೀ ಗಳಷ್ಟು ಒತ್ತಡದ ಗಾಳಿ ಬೇಕಾಗುವುದು. ಕಚರಾದಲ್ಲಿರುವ ಅಮೋನಿಯ ಎಲ್ಲವೂ ನೈಟ್ರೇಟುಗಳಾಗುವ ತನಕ ಹೀಗೇ ಮಾಡುತ್ತಿರಬೇಕು. ಒತ್ತು ಗಾಳಿಯನ್ನು ನಿಲ್ಲಿಸಿಬಿಟ್ಟರೆ ರಾಡಿ ತಳದಲ್ಲಿ ಕೂರುತ್ತದೆ. ತೇಲುವ, ತಿಳಿಯಾದ ಕಚರಾ ಸಾರವನ್ನು ಹೊರಬಿಟ್ಟು ಕಚ್ಚಾ ಕಚರಾವನ್ನು ಬೆರೆಸಬಹುದು. ಹೀಗೆ ಹಲವು ಸಾರಿ ನಡೆಸಿದ ಮೇಲೆ ಉಳಿವ ಚುರುಕುಗೊಳಿಸಿದ ರಾಡಿ ವಾಸನೆಯಿಲ್ಲದೆ, ಗಾಳಿಜೀವಿ ಏಕಾಣುಜೀವಿಗಳು ಹೇರಳವಾಗಿ ತುಂಬಿರುವುದರಿಂದ ಶುದ್ಧೀಕರಣ ವಿಧಾನಗಳಲ್ಲಿ ಬಳಸಬಹುದು.

ಇಲ್ಲಿ ಶುದ್ಧೀಕರಣ ಎರಡು ಹಂತಗಳಲ್ಲಿ ಸಾಗುತ್ತದೆ. ಮೊದಲು ಜೈವಿಕ ವಸ್ತುಗಳು ಒಡೆದು, ಇಂಗಾಲದಿಂದ ಇಂಗಾಲದ ಡೈಆಕ್ಸೈಡ್ ಹುಟ್ಟುತ್ತದೆ. ಆಮೇಲೆ ಕಚರಾಸಾರ ಇದ್ದಹಾಗೇ ಉಳಿದರೂ ಗಾಳಿಗೊಡ್ಡುವುದು ಮುಂದುವರಿದು ನೈಟ್ರೇಟುಗಳು ತಯಾರಾಗುತ್ತವೆ. ಚುರುಕುಗೊಳಿಸಿದ ರಾಡಿ ವಿಧಾನದ ಜೋಡಣೆಯನ್ನು ಚಿತ್ರದಿಂದ ತಿಳಿಯಬಹುದು.

ಚುರುಕುಗೊಳಿಸಿದ ರಾಡಿಯನ್ನೂ ಕಚರಾಸಾರವನ್ನೂ ಗಾಳಿಗೊಡ್ಡುವ ವಿಧಾನಗಳು ಹಲವಾರಿವೆ. ಗಾಳಿಗೊಡ್ಡುವ ತೊಟ್ಟಿಗಳ ತಳದಲ್ಲಿ ತೂತುತೂತಾಗಿರುವ ಕೊಳವೆಗಳು ಇಲ್ಲವೇ ಹಂಚುಗಳ ಮೂಲಕ ಗಾಳಿಯನ್ನು ರಾಡಿ ಇಲ್ಲವೇ ಕಚರಾಸಾರದ ಮೂಲಕ ಒತ್ತಿ ಬಿಡಬಹುದು. ಕಚರಾದೊಂದಿಗೆ ರಾಡಿ ಬೆರೆಸಿದ್ದನ್ನು ತೊಟ್ಟಿಯ ತಳದಲ್ಲಿರವ ಕೊಳವೆಯ ಮೂಲಕ ಮೇಲೆಳೆದುಕೊಂಡು ಮೇಲ್ಮೈ ಮೇಲೆ ಸಿಂಪಡಿಸಿ ಗಾಳಿಗೊಡ್ಡಬಹುದು. ಎರಡನೆಯ ವಿಧಾನಕ್ಕೆ ಮೇಲ್ಮೈಗಾಳಿಗೊಡ್ಡುವ ಸಿಂಪ್ಲೆಕ್ಸ್‌ ವಿಧಾನ ಎಂದಿದೆ.
ಸಿಂಪ್ಲೆಕ್ಸ್‌ ವಿಧಾನ: ಇದರಲ್ಲಿ ತಲೆಕೆಳಗಾದ ಶಂಖಾಕಾರದ ತೊಟ್ಟಿಯ ನಡುವೆ ಮೇಲೆ ಸೇದಿಕೊಳ್ಳುವ ಕೊಳವೆ ಇರುವುದು. ಇದು ತಳದಿಂದ 6' ಎತ್ತರಕ್ಕಿದೆ. ಮೇಲಿನ ಬಾಯಿ ಬೀಸುವ ಕಲ್ಲಿನ ಗುಳಿಯಂತಿದ್ದು, ಅದರಲ್ಲಿ ನೆಟ್ಟಗಿರಿಸಿದ ನಡುಗಂಬಕ್ಕೆ ಬೀಸು ರೆಕ್ಕೆಗಳನ್ನು ಓಲಿಸಿ ಜೋಡಿಸಿರುತ್ತವೆ. ವಿದ್ಯುತ್ ಯಂತ್ರದಿಂದ ಇದು ಗಿರ್ರನೆ ತಿರುಗಿದಾಗ ಸೇದು ಕೊಳುವೆಯ ಮೂಲಕ ರಾಡಿ ಬೆರೆತ ಕಚರಾವನ್ನು ಮೇಲೆ ಸೇದಿಕೊಂಡು ತುಂತುರಾಗಿ ಮೇಲೆ ಚಿಮ್ಮಿ ಚೆನ್ನಾಗಿ ಗಾಳಿಗೊಡ್ಡುವುದು. ಹೀಗೆ ಸೇದುಕೊಳವೆಯಲ್ಲಿ ಮೇಲೇರಿ ತೊಟ್ಟಿಯಲ್ಲಿ ಚಿಮ್ಮಿ, ತಳ ಸೇರಿ, ಮತ್ತೆ ಮೇಲೇರಿ ಸುತ್ತಿ ಸುತ್ತಿರುವುದು. ಚೊಕ್ಕ ಕಚರಾ ಸಾರವನ್ನು ಚುರುಕುಗೊಳಿಸಿದ ರಾಡಿಯಿಂದ ಬೇರ್ಪಡಿಸಲು ಇದನ್ನು ಗಸಿಗಟ್ಟಿಸುವ ತೊಟ್ಟಿಗಳಿಗೆ ಬಿಡಬೇಕು.

 ರಾಡಿ ವಿಲೇವಾರಿ 
ಕಚರಾ ದಿಂದ ತೋಟಗಾರಿಕೆ ಒಂದರ ಹೊರತಾಗಿ, ಕಚರಾ ವಿಲೇವಾರಿಯ ಎಲ್ಲ ವಿಧಾನಗಳಲ್ಲೂ ಕಚರಾದ ರಾಡಿ ರಾಶಿ ಬೀಳುವುದೊಂದು ತೊಡಕು. ಇದರಲ್ಲಿ ನೀರು ವಿಪರೀತ (98-99.5%) ಇದೆ. ಅನುಕೂಲತೆಗಳಿಗೆ ತಕ್ಕಂತೆ, ಜಮೀನಿನ ಮೇಲೆ ಹರಿಸು ವುದು, ಗೊಬ್ಬರವಾಗಿ ಉಳುಮೆಗೆ ಹಾಕುವುದು, ರಾಡಿ ಪಾತಿಗಳಲ್ಲಿ ಒಣಗಿಸುವುದು; ಹಳ್ಳ, ಗುಂಡಿಗಳಲ್ಲಿ ಸುರಿವುದು. ಜಿಡ್ಡನ್ನು ಮತ್ತೆ ಪಡೆವಂತೆ ಚೊಕ್ಕಗೊಳಿಸಿಕೆ, ಒಣಗಿಸಿ ಗೊಬ್ಬರ ಮಾಡುವುದು-ಮೊದಲಾದ ವಿಧಾನಗಳನ್ನು ಅನುಸರಿಸಬಹುದು. ಬೆರಗೊಬ್ಬರವನ್ನು (ಕಾಂಪೋಸ್ಟ್‌) ತಯಾರಿಸುವ ಯತ್ನಗಳೂ ಆಗಿವೆ. ರಾಡಿಯಲ್ಲಿ ಸಾರಜನಕ, ಫಾಸ್ಫೇಟುಗಳು ಹೇರಳವಾಗಿರುವುದರಿಂದ ನೀರನ್ನು ಕಳೆದುಬಿಟ್ಟರೆ ಬಲು ಒಳ್ಳೆಯ ಗೊಬ್ಬರವಾಗುತ್ತದೆ. ಅಮೆರಿಕದಲ್ಲಿ ಈ ವಿಧಾನ ರೂಢಿಯಲ್ಲಿದೆ. ಭಾರತದಲ್ಲಿ ಜಂಷದ್ಪುರದಲ್ಲಿ ಸು. 50 ಎಕರೆ ಬಂಜರಿಗೆ ಹಾಕಿ ಹುಲುಸಾದ ಬೆಳೆ ಎತ್ತುತ್ತಿರುವರು.

 ರಾಡಿ ಅರಗಣೆ 
ನಂಜಿನ ತೊಟ್ಟಿಗಳ ವಿಚಾರವಾಗಿ ಕೇಮ್ರಾನ್ (1896) ನಡೆಸಿದ ಪ್ರಯೋಗದಿಂದ ಕಚರಾದ ರಾಡಿ ನಿರ್ಗಾಳಿ ಜೀವಿಗಳಿಂದ ಹುಳಿನೊರೆಯೆದ್ದು ಅನಿಲ ಹುಟ್ಟುವುದು ಗೊತ್ತಿದೆ. ಆದರೆ ಹೀಗಾಗಲು ಸರಿಯಾದ ಸಂದರ್ಭಗಳು ಇತ್ತೀಚೆಗೆ ಮಾತ್ರ ಗೊತ್ತಾಗಿವೆ. ಹುಳಿನೊರೆ ಸರಿಯಾಗಿ ಎದ್ದರೆ, ರಾಡಿ ರಾಶಿ ಕಡಿಮೆಯಾಗಿ ದುರ್ನಾತವಿಲ್ಲದಂತಾಗಿ, ಸುಲಭವಾಗಿ ಒಣಗಿ ಕೈಗೆತ್ತಿಕೊಳ್ಳುವಂತಾಗುತ್ತದೆ. ಇದರಿಂದ ಹುಟ್ಟಿದ ಅನಿಲದಿಂದ ಬರುವ ಕಾವು ಜೋರಾದುದು. ಬೆಳಕು, ಕಾವು, ಶಕ್ತಿಗಳಿಗಾಗಿ ಬಳಸಬಹುದು. ರಾಡಿ ಪುರ್ತಿ ಅರಗಲು 20-30 ದಿವಸಗಳು ಹಿಡಿಯುತ್ತವೆ.

 ಮಲಮೂತ್ರ ಸಾಗಣೆ ವಿಧಾನಗಳು 
ವಾಸದ ಮನೆಗಳಿಂದ ಮಲಮೂತ್ರ ಎಲ್ಲವನ್ನೂ ಬೇಗನೆ ಹೊರಸಾಗಹಾಕುವುದು ಮುಖ್ಯ ಗುರಿ. ಕಕ್ಕಸಿನಲ್ಲಿ ಪುಟ್ಟಿಗೆಗಳನ್ನಿಟ್ಟು ಹೊತ್ತು ಸಾಗಿಸುವ ಒಣ ವಿಧಾನ ಎಂದಿಗೂ ಚೆನ್ನಕಾಣದು. ದಿನಕ್ಕೊಂದು ಬಾರಿ ಎತ್ತುವುದಲ್ಲದೆ ಅದರ ವಿಲೇವಾರಿ ಕೂಡ ಸರಿಯಿರದು. ಒಬ್ಬೊಬ್ಬನಿಗೂ ಸು. 60-70 ಲೀಟರುಗಳಷ್ಟು ನೀರು ಒದಗುವಂತಿರವ ನಗರಗಳಲ್ಲಿ ನೀರಿಂದ ಸಾಗಿಸುವ ಒಳಚರಂಡಿ ಏರ್ಪಾಡೇ ಆರೋಗ್ಯಕರವಾದ ವಿಲೇವಾರಿ ವಿಧಾನ.

ಒಳಚರಂಡಿ ಏರ್ಪಾಡಿಲ್ಲದ ನಗರ, ಪಟ್ಟಣ, ಊರುಗಳಲ್ಲಿ ಕೊಳಾಯಿ ನೀರು ದೊರೆಯುತ್ತಿದ್ದರೆ, ನಂಜಿನ ತೊಟ್ಟಿ ವಿಧಾನವೇ ಒಳ್ಳೆಯದು. ಆರೋಗ್ಯ ಕೆಡದು, ಗಲೀಜೂ ಇರದು. ಮನೆ ಬಚ್ಚಲು, ಕಕ್ಕಸು ವ್ಯವಸ್ಥೆಗೆ ಒಬ್ಬನಿಗೆ ದಿವಸಕ್ಕೆ 40 ಲೀಟರುಗಳಷ್ಟಾದರೂ ನೀರು ಬೇಕು. ಇದರಿಂದ ಬರುವ ಕಚರಾ ಸಾರವನ್ನು ಹೊಳೆ, ನದಿಗಳಿಗೆ ಬಿಟ್ಟುಬಿಡದೆ, ಜಮೀನು ಇರುವುದಾದರೆ ಬಿಡುವು ಕೊಟ್ಟು ಸೋಸುವ ಇಲ್ಲವೇ ತೋಟಗಾರಿಕೆ ವಿಧಾನದಲ್ಲಿ ಬಳಸಬೇಕು.

ನೆಲದ ಮಣ್ಣಲ್ಲಿ ಸೋಸಿ ಬಂದ ಕಚರಾ ಸಾರವನ್ನು ಕುಡಿಯಲು ಬಳಸದ ಹೊಳೆಯೊಳಕ್ಕೆ ಬಿಡಬಹುದು. ಬೇಸಾಯಕ್ಕೆ ಬಳಸಿದರೆ ಜಮೀನು ಫಲವತ್ತಾಗುತ್ತದೆ. ಅಕ್ಕಪಕ್ಕದಲ್ಲಿ ಜಮೀನಿಲ್ಲವಾದರೆ, ಚುರುಕುಗೊಳಿಸಿದ ರಾಡಿ ವಿಧಾನದಲ್ಲಿ ವಿಲೇವಾರಿ ಆಗುವುದರ ಸಮ ಇನ್ನಿಲ್ಲ. ಇದರಿಂದ ಹೊರಬೀಳುವ ಕಚರಾಸಾರದಿಂದ ಅಪಾಯ ಇಲ್ಲದಿಲ್ಲ. ಮತ್ತೆ ಮಣ್ಣಲ್ಲಿ ಸೋಸಿಯೋ ರಾಸಾಯನಿಕವಾಗಿ ಸೋಂಕು ಕಳೆದೋ ಕಚರಾ ಸಾರವನ್ನು ಆಚೆ ಹರಿಯಬಿಡಬಹುದು. 

ಸಾಕಷ್ಟು ನೀರು ದೊರೆಯದಿದ್ದರೆ, ಕೊಳಾಯಿ ಸರಬರಾಜು ಇಲ್ಲವಾದರೆ, ಕೈಯಲ್ಲಿ ಹೊತ್ತು ಮಲ ಸಾಗಿಸುವ ಕಕ್ಕಸು, ತಿಪ್ಪೆಗಳಿಗಿಂತಲೂ ಕೈಯಿಂದ ಕೊಚ್ಚುವ ನೀರಿನ ತಡೆಯ (ವಾಟರ್ ಸೀಲ್) ಕಕ್ಕಸೇ ಒಳ್ಳೆಯದು. ಅಗ್ಗ, ಆರೋಗ್ಯಕರ; ಇದರ ಕಚರಾ ನೀರನ್ನು ಆಳವಾದ ಇಮರುಗುಂಡಿಗೆ ಬಿಡಬಹುದು. ಇದರಿಂದ ಕಕ್ಕಸನ್ನು ಮನೆ ಒಳಗಿರಿಸಿಕೊಳ್ಳುವ, ಬೇಕೆಂದಾಗ ತೊಳೆದು ಚೊಕ್ಕಟಪಡಿಸುವ ದೊಡ್ಡ ಅನುಕೂಲತೆಯಿದೆ. ನೀರು ಸುರಿದು ಬಳಸುವ ಕಕ್ಕಸಿಗಂತೂ ಅಷ್ಟೊಂದು ನೀರೂ ಬೇಕಿರದು. ಪಟ್ಟಣಗಳಲ್ಲಿ ಇಮರುಗುಂಡಿಯನ್ನು ಗಾರೆಯಿಂದ ಕಟ್ಟಬೇಕು. ಇವೆಲ್ಲ ವಿಧಾನಗಳಿಂದ ಕುಡಿಯುವ ನೀರಿನ ಬಾವಿಗಳಿಗೆ ಯಾವ ಕೆಡುಕೂ ತಾಕದು.	(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ